*ಕರಡಿ ದಾಳಿಗೆ ಯುವ ರೈತ ಗಂಭೀರ ಗಾಯ ಪ್ರಾಣ ಉಳಿಸಿಕೊಳ್ಳಲು ಮರ ಏರಿದರೂ ಬಿಡದ ಕಾಡುಪ್ರಾಣಿ*
ಸವದತ್ತಿ : ಖಾನಾಪೂರ ತಾಲೂಕಿನ ಹುಳಂದ ಗ್ರಾಮದ ಸಮೀಪ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ಯುವ ರೈತನೋರ್ವನ ಮೇಲೆ ಕರಡಿ ಭೀಕರವಾಗಿ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಹುಳಂದ ಗ್ರಾಮದ ನಿವಾಸಿ ಮಹೇಶ ಗಾವಡೆ (24) ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ದುರ್ದೈವಿ ಯುವಕ.
ಮಹೇಶ ಅವರು ಎಂದಿನಂತೆ ತಮ್ಮ ಜಮೀನಿನ ಬಳಿ ದನಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಪೊದೆಯಲ್ಲಿದ್ದ ಕರಡಿ ದಿಢೀರ್ ಆಗಿ ಅವರ ಮೇಲೆ ದಾಳಿ ಮಾಡಿದೆ. ಕರಡಿಯಿಂದ ರಕ್ಷಣೆ ಪಡೆಯಲು ಮಹೇಶ ಅವರು ತಕ್ಷಣವೇ ಸಮೀಪದ ಮರವೊಂದನ್ನು ಏರಿದ್ದಾರೆ. ಆದರೂ ಬಿಡದ ಕರಡಿ, ಮರವನ್ನು ಹಿಂಬಾಲಿಸಿ ಹೋಗಿ ಅವರ ಮೇಲೆ ಮತ್ತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.

ದಾಳಿಯಿಂದ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದ ಯುವಕನನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಆರೋಗ್ಯ ವಿಚಾರಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯು ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ರೈತರು ಹಾಗೂ ಜನರಲ್ಲಿ ಕರಡಿ ದಾಳಿಯ ಭೀತಿ ಆವರಿಸಿದೆ. ಕಾಡುಪ್ರಾಣಿಗಳ ಉಪಟಳಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
