ರೇಷ್ಮೆ ಬೆಳೆಗಾರರಿಗೆ ಆಧುನಿಕ ಸಲಕರಣೆ ವಿತರಣೆ: ರೈತರ ಆರ್ಥಿಕ ಸಬಲೀಕರಣಕ್ಕೆ ಶಾಸಕ ವಿಶ್ವಾಸ ವೈದ್ಯ
ಸವದತ್ತಿ : ರೇಷ್ಮೆ ಕೃಷಿಯು ರೈತರ ಆರ್ಥಿಕ ಭದ್ರತೆಗೆ ಭದ್ರ ಬುನಾದಿಯಾಗಿದೆ. ತಾಲೂಕಿನ ರೈತರು ಕೃಷಿಯೊಂದಿಗೆ ರೇಷ್ಮೆ ಉಪಕಸುಬನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿದ್ದಾರೆ. ರೈತರ ಆರ್ಥಿಕ ಪ್ರಗತಿಗೆ ಪೂರಕವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ನೇರವಾಗಿ ಅವರಿಗೆ ತಲುಪಬೇಕು ಎಂಬುದು ನಮ್ಮ ಆಶಯವಾಗಿದೆ, ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ, ರೇಷ್ಮೆ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ರೇಷ್ಮೆ ಬೆಳೆಗಾರರಿಗೆ ಸಲಕರಣೆ ವಿತರಿಸಿ ಮಾತನಾಡಿದ ಅವರು ರೈತರಿಗೆ ರೇಷ್ಮೆ ಕೃಷಿಗೆ ಸಂಬಂಧಿಸಿದ ವಿವಿಧ ಯಾಂತ್ರೀಕೃತ ಸಲಕರಣೆಗಳನ್ನು ವಿತರಿಸಿ ರೈತರು ಹಳೆಯ ಪದ್ಧತಿಯ ಜೊತೆಗೆ ಆಧುನಿಕ ಯಾಂತ್ರೀಕೃತ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕು.ತಂತ್ರಜ್ಞಾನದ ಬಳಕೆಯಿಂದ ರೇಷ್ಮೆಯ ಗುಣಮಟ್ಟ ಹೆಚ್ಚುವುದಲ್ಲದೆ, ಕಡಿಮೆ ಶ್ರಮದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯ ಮೂಲಕ ರೈತರು ಹೆಚ್ಚಿನ ಲಾಭ ಗಳಿಸಿ, ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು, ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಚಂದ್ರು ಶ್ಯಾಮರಾಯನವರ, ಹನಮಂತ ಸಿಂಗನ್ನವರ, ಗಿರೀಶ್ ಮುನವಳ್ಳಿ, ಸುರೇಶ್ ತುಪ್ಪದ, ಸಂತೋಷ ನೊರೆವರ, ಮೈಲಾರಪ್ಪ ಹೊಸಮನಿ, ಪ್ರವೀಣ್ ರಾಮಪ್ಪನವರ, ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು, ಹಾಗೂ ತಾಲೂಕಿನ ಗ್ರಾಮಗಳಿಂದ ಆಗಮಿಸಿದ್ದ ರೇಷ್ಮೆ ಬೆಳೆಗಾರರು ಭಾಗವಹಿಸಿದ್ದರು.