ಸವದತ್ತಿ : ತಾಲೂಕಿನ ಇನಾಂಹೊಂಗಲ ಗ್ರಾಮದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣ ಇದೀಗ ಕೇವಲ ನಾಮಕಾವಸ್ಥೆಯಾಗಿದ್ದು, ಇಲ್ಲಿಗೆ ಬಸ್ಗಳು ಆಗಮಿಸದಿರುವುದು ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅವರು ಅದ್ದೂರಿಯಾಗಿ ಉದ್ಘಾಟಿಸಿದ್ದ ಈ ಬಸ್ ನಿಲ್ದಾಣ ನಿರ್ಮಾಣಗೊಂಡು ಎರಡು ವರ್ಷಗಳು ಕಳೆದಿವೆ. ಆದರೂ, ಸಾರಿಗೆ ಬಸ್ಗಳು ನಿಲ್ದಾಣದ ಒಳಗೆ ಪ್ರವೇಶಿಸದೆ, ಮುಖ್ಯ ರಸ್ತೆಯ ಮೇಲೆಯೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಇದರಿಂದ ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು, ವೃದ್ಧರು ಮತ್ತು ಶಾಲಾ ವಿದ್ಯಾರ್ಥಿಗಳು ಬಿಸಿಲು ಮಳೆ ಎನ್ನದೆ ರಸ್ತೆ ಬದಿಯಲ್ಲಿಯೇ ಬಸ್ಸಿಗಾಗಿ ಕಾಯುವ ಅನಿವಾರ್ಯತೆ ಎದುರಾಗಿದೆ.
ಚಾಲಕರು ಬಸ್ಗಳನ್ನು ನಿಲ್ದಾಣದ ಒಳಗೆ ತರದೆ ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅಪಘಾತಗಳ ಭೀತಿಯೂ ಕಾಡುತ್ತಿದೆ. ಸರ್ಕಾರದ ಹಣ ಮತ್ತು ಶಾಸಕರ ಪ್ರಯತ್ನದಿಂದ ನಿರ್ಮಾಣವಾದ ಈ ಸೌಲಭ್ಯವು ಬಳಕೆಗೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಥಳೀಯ ಮುಖಂಡ ಜಾವೇದ್ ದಂಡಿನ ಪ್ರತಿಕ್ರಿಯಿಸಿ, ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಚಾಲಕರು ಬಸ್ಗಳನ್ನು ಕಡ್ಡಾಯವಾಗಿ ನಿಲ್ದಾಣದ ಒಳಗೆ ಬಂದು ಹೋಗುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು.ಎಂದರು
ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ಮೂಲಕ ಪ್ರಯಾಣಿಕರ ಗೋಳನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.