ಸವದತ್ತಿ : ನಗರದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ರಾಮಾಪೂರಸೈಟ್ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಯಿತು. ಚರಂಡಿಗಳಲ್ಲಿ ತುಂಬಿದ್ದ ಹೂಳು ಮತ್ತು ಗಿಡಗಂಟಿಗಳಿಂದ ನೀರು ಸರಾಗವಾಗಿ ಹರಿಯದ ಕಾರಣ ರಸ್ತೆ ಹಾಗೂ ಮನೆಗಳ ಅಂಗಳಕ್ಕೆ ನೀರು ನುಗ್ಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿನಮಠ ಅವರು, ತಕ್ಷಣವೇ ಸಿಬ್ಬಂದಿಗಳೊಂದಿಗೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೆಸಿಬಿ ಯಂತ್ರಗಳ ಸಹಾಯದಿಂದ ಚರಂಡಿಗಳಲ್ಲಿ ತುಂಬಿದ್ದ ಕಸಕಡ್ಡಿ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಭರದಿಂದ ಕೈಗೊಳ್ಳಲಾಯಿತು.
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೇವಲ ಮಳೆ ಬಂದಾಗ ಮಾತ್ರವಲ್ಲದೆ, ಚರಂಡಿಗಳನ್ನು ನಿಯಮಿತವಾಗಿ ಹೂಳು ತೆಗೆಯುವ ಮೂಲಕ ನಿರ್ವಹಿಸಬೇಕು ಮತ್ತು ಚರಂಡಿಗಳನ್ನು ಶಾಶ್ವತವಾಗಿ ದುರಸ್ತಿಪಡಿಸಬೇಕು ಎಂದು ಸ್ಥಳೀಯರು ನಗರಸಭೆ ಆಡಳಿತಕ್ಕೆ ಮನವಿ ಮಾಡಿದ್ದಾರೆ.