ಸವದತ್ತಿ : ತಾಲೂಕಿನ ಭಂಡಾರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳೂರ ಗ್ರಾಮದಲ್ಲಿ ಸೋಮವಾರ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ಉದ್ಯೋಗವನ್ನು ಅರಸಿ ಬೇರೆ ಪ್ರದೇಶಗಳಿಗೆ ದುಡಿಯಲು ವಲಸೆ ಹೋಗದಂತೆ ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸರಕಾರ ದುಡಿಯುವ ಕೈಗಳಿಗೆ ಸ್ವ-ಗ್ರಾಮದಲ್ಲಿಯೇ ಉದ್ಯೋಗವನ್ನು ನೀಡುತ್ತಿದೆ.
ಗುಳೆ ಹೋಗುವುದನ್ನು ತಪ್ಪಿಸಲು ವರ್ಷಕ್ಕೆ ಒಂದು ಕುಟುಂಬಕ್ಕೆ 100 ದಿನಗಳ ಕೂಲಿ ಕೆಲಸವನ್ನು ನೀಡಲಾಗುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ, ಜೊತೆಗೆ ಸಮಾನ ಕೆಲಸ ನೀಡಲಾಗುತ್ತಿದ್ದು, ಪ್ರತಿಯೊಂದು ಕುಟುಂಬ ನರೇಗಾ ಯೋಜನೆಯ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದರು.
ತಾಪಂ ಸಹಾಯಕ ನಿರ್ದೇಶಕ ಆರ್.ಬಿ.ರಕ್ಕಸಗಿ ಮಾತನಾಡಿ, ಮನರೇಗಾ ಯೋಜನೆಯಡಿ ಕೂಲಿ ಕೆಲಸದ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಇಂಗು ಗುಂಡಿ, ಕೃಷಿ ಹೊಂಡ , ದನ, ಕುರಿ ಹಾಗೂ ಕೋಳಿ ಶೆಡ್ ಸೇರಿಂದತೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ನಿಮಿತ್ತ 2023-24ನೇ ಸಾಲಿನಲ್ಲಿ 100 ದಿನ ಕೆಲಸ ಪೂರೈಸಿದ ಕೂಲಿಕಾರರಿಗೆ
ಸನ್ಮಾನಿಸಲಾಯಿತು.
ಬಳಿಕ ನರೇಗಾ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು.
ಈ ವೇಳೆ ಅರಣ್ಯಾಧಿಕಾರಿ ನಿಹಾ ತೋರಗಲ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಮೇಶ ಬೆಟಸೂರ, ಗ್ರಾಪಂ ಅಧ್ಯಕ್ಷೆ ಮೀರಾಜಬಿ ಮಿರ್ಜಿ, ಶಿಂದೋಗಿ ಗ್ರಾಪಂ ಅಧ್ಯಕ್ಷ ಡಿ.ಡಿ.ಟೋಪೋಜಿ, ನಾಗರಾಜ ಬೆಹರೆ, ಮಲೀಕಜಾನ ಮೋಮಿನ, ಗ್ರಾ ಪಂ ಸದಸ್ಯರಾದ ಮೌಲಾಸಾಬ ಧಾರವಾಡ, ಲಕ್ಷ್ಮಿ ಜೀವಾಪೂರ, ಜಮಾಲನಾಯ್ಕ ದೊಡಮನಿ, ಫಕೀರಪ್ಪ ಚಂದರಗಿ ಹಾಗೂ ಗ್ರಾಮಸ್ಥರು, ಕೂಲಿಕಾರರು ಇನ್ನಿತರರು ಇದ್ದರು.
