ಸವದತ್ತಿ ಪರಿಸರ ಸಂರಕ್ಷಣೆ ಇಂದಿನ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಿ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಹೇಳಿದರು.
ಇಲ್ಲಿನ ಕೆ.ಎಲ್.ಇ ಸಂಸ್ಥೆಯ ಶ್ರೀ ಎಸ್.ವಿ.ಎಸ್. ಬೆಳ್ಳುಳ್ಳಿ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಸಿ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮರಗಿಡಗಳು ನಮಗೆ ಆಮ್ಲಜನಕ ಮತ್ತು ನೆರಳು ನೀಡುವ ಮೂಲಕ ಜೀವನಾಧಾರವಾಗಿವೆ. ಈ ನಿಟ್ಟಿನಲ್ಲಿ ಯುವಜನತೆ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ರಾಜಶೇಖರ ನಿಡವಣಿ, ಉದಯ ಹುರಳಿ, ಶಿವಾನಂದ ಬೆಲ್ಲದ, ವಿರೂಪಾಕ್ಷ ಸುತಗಟ್ಟಿ, ಶ್ರೀ ಪ್ರಭುಲಿಂಗೇಶ್ವರ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸಿಬ್ಬಂದಿ ವರ್ಗದವರು, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.