ಬೆಳೆಯುತ್ತಿರುವ ಭಾರತ. ಆದರೆ ಏಕೆ ಹೆಚ್ಚುತ್ತಿದೆ ಆರ್ಥಿಕ ಆತಂಕ
ಅಯಾನಅಲಿ ಧೂಪದಾಳ ಪಿಯುಸಿ-2 ಕಲಾ ವಿದ್ಯಾರ್ಥಿ
ಸವದತ್ತಿ : ಬೆಳಿಗ್ಗೆ ಆರು ಗಂಟೆಗೆ ಎದ್ದು ಪೆಟ್ರೋಲ್ ಬಂಕಿಗೆ ಹೋಗುವ ಮುಂಚೆ ಆಟೋ ಚಾಲಕ ಒಂದು ಕ್ಷಣ ನಿಂತುಕೊಳ್ಳುತ್ತಾನೆ. ಲೀಟರಗೆ ₹107. ಎರಡು ವರ್ಷದ ಹಿಂದೆ ₹95 ಇತ್ತು. ಗಿರಾಕಿಗಳು ಬಾಡಿಗೆ ಹೆಚ್ಚಿಸಿದ್ದಕ್ಕೆ ದೂರುತ್ತಾರೆ ಆದರೆ ಡೀಸೆಲ್, ಮೊಬೈಲ್ ಡೇಟಾ, ಮಕ್ಕಳ ಶಾಲೆ ಶುಲ್ಕ ಎಲ್ಲವೂ ಏರಿರುವಾಗ ಅವನು ಮೌನದಲ್ಲಿ ಲೆಕ್ಕ ಹಾಕುತ್ತಾನೆ.
ಅದೇ ನಗರದ ಕಾರ್ಪೊರೇಟ್ ಕಟ್ಟಡದ 12ನೇ ಮಹಡಿಯಲ್ಲಿ ಒಬ್ಬ ಐಟಿ ಉದ್ಯೋಗಿ ತನ್ನ ಲ್ಯಾಪ್ ಟಾಪ್ ತೆರೆಯುತ್ತಾನೆ. ವರ್ಷಕ್ಕೆ ₹18 ಲಕ್ಷ ಸಂಬಳ ಕೇಳಲು ಚೆನ್ನಾಗಿದೆ. ಆದರೆ ಮನೆ ಸಾಲದ ಇಎಂಐ, ಮಗನ ಶಾಲೆ ಶುಲ್ಕ, ತಾಯಿಯ ಆಸ್ಪತ್ರೆ ಬಿಲ್ ಎಲ್ಲ ಕಳೆದ ಮೇಲೆ ತಿಂಗಳ ಕೊನೆಯಲ್ಲಿ ಉಳಿಯುವುದು ₹3,000 ಮಾತ್ರ. ಇದು ಭಾರತದ ಆರ್ಥಿಕ ವೈರುಧ್ಯ ಮೇಲೆ ಹೊಳೆಯುವ ಅಂಕಿ, ಒಳಗೆ ಮುಗ್ಗರಿಸುವ ಬದುಕು.
ಭಾರತ ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ. ಅಮೆರಿಕ, ಚೀನಾ, ಜರ್ಮನಿ, ಜಪಾನ್ ಎಲ್ಲರಿಗಿಂತ ಮುಂದೆ. ಸ್ಟಾರ್ಟಪಗಳು ಲಕ್ಷ ದಾಟಿವೆ, ಯುಪಿಐ ಜಗತ್ತಿಗೆ ಮಾದರಿಯಾಗಿದೆ, ಮೊಬೈಲ್ ಉತ್ಪಾದನೆಯಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಇವು ನಿಜವಾದ ಹೆಮ್ಮೆಯ ಸಾಧನೆಗಳು ಇದನ್ನು ಯಾರೂ ಅಲ್ಲಗಳೆಯಲಾರರು.
ಆದರೆ ಅದೇ ಸಮಯದಲ್ಲಿ ಒಂದು ಪ್ರಶ್ನೆ ಕಾಡುತ್ತದೆ ಈ ಬೆಳವಣಿಗೆ ಯಾರ ಮನೆಗೆ ತಲುಪಿದೆ? ತಿಂಗಳ ₹55,000 ಸಂಬಳ ಇದ್ದರೂ ಉಳಿತಾಯ ₹8,000 ಮೀರದ ಶಿಕ್ಷಕ ದಂಪತಿ, ಪದವಿ ಕೈಯಲ್ಲಿ ಹಿಡಿದು ಸ್ವಿಗ್ಗಿ ಡೆಲಿವರಿ ಮಾಡುವ ಇಂಜಿನಿಯರ್, ನೀಟ್ ಕೋಚಿಂಗ್ ಶುಲ್ಕಕ್ಕಾಗಿ ಸಾಲ ಮಾಡಿಕೊಂಡ ತಂದೆ ಇವರ ಕಥೆ ಯಾವ ಜಿಡಿಪಿ ವರದಿಯಲ್ಲೂ ಕಾಣಿಸುವುದಿಲ್ಲ.
ಮೂರು ವರ್ಷ ಹಿಂದೆ ಒಂದು ಡಾಲರಗೆ ₹77 ಕೊಡಬೇಕಿತ್ತು. ಇಂದು ₹95.9. ರೂಪಾಯಿ ದುರ್ಬಲವಾದಾಗ ಅದು ಕೇವಲ ವಿನಿಮಯ ದರದ ಬದಲಾವಣೆ ಅಲ್ಲ ಅದು ನಿಮ್ಮ ಅಡುಗೆ ಮನೆಯ ಮೇಲಿನ ನೇರ ದಾಳಿ. ಪೆಟ್ರೋಲ್ ದುಬಾರಿಯಾಗುತ್ತದೆ, ತರಕಾರಿ ತುಟ್ಟಿಯಾಗುತ್ತದೆ, ಮಗಳ ಲ್ಯಾಪ್ಟಾಪ್ ಕೈಗೆಟುಕದಾಗುತ್ತದೆ. ಇದು ಶ್ರೀಮಂತರನ್ನು ಹೆಚ್ಚು ಕಾಡುವುದಿಲ್ಲ ಮಧ್ಯಮ ವರ್ಗ ಮತ್ತು ಬಡವರನ್ನು ಅದು ನಿಧಾನವಾಗಿ ತಿನ್ನುತ್ತದೆ.
ಸರ್ಕಾರ ಹೇಳುತ್ತದೆ ಹಣದುಬ್ಬರ 3.48%. ಆದರೆ ಅದೇ ತಿಂಗಳು ಟೊಮೆಟೊ , ತೆಂಗಿನಕಾಯಿ , ಹೂಕೋಸು ದುಬಾರಿಯಾಗಿದ್ದರೆ ಆ ಅಂಕಿ ಯಾರ ಬದುಕನ್ನು ಪ್ರತಿಬಿಂಬಿಸುತ್ತದೆ? ₹50 ಲಕ್ಷ ಸಂಬಳದವ ಮತ್ತು ₹1 ಲಕ್ಷ ಸಂಬಳದವ ಒಟ್ಟಿಗೆ ಕೂತಾಗ ಸರಾಸರಿ ₹25 ಲಕ್ಷ ಕಾಣಿಸುತ್ತದೆ ಆದರೆ ₹1 ಲಕ್ಷದ ಜೀವನ ಬದಲಾಗಿರುವುದಿಲ್ಲ. ಸಂಖ್ಯೆ ಚೆನ್ನಾಗಿ ಕಾಣಿಸಿದ ಮಾತ್ರಕ್ಕೆ ಹೊಟ್ಟೆ ತುಂಬುವುದಿಲ್ಲ.
ಭಾರತ ಇಂದು ಜಗತ್ತಿನ ಅತ್ಯಂತ ಯುವ ದೇಶ. 65 ಕೋಟಿ ಜನ 35 ವರ್ಷದ ಒಳಗಿದ್ದಾರೆ — ಇದು ನಮ್ಮ ಶ್ರೇಷ್ಠ ಶಕ್ತಿ. ಆದರೆ ಪ್ರತಿ ವರ್ಷ 70–80 ಲಕ್ಷ ಯುವಕರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಾರೆ, ಸೃಷ್ಟಿಯಾಗುವ ಉದ್ಯೋಗ ಮಾತ್ರ ಸಾಲುವುದಿಲ್ಲ. ಇಂಜಿನಿಯರಿಂಗ್ ಪದವಿ ಪಡೆದ ಯುವಕ ಸ್ವಿಗ್ಗಿ ಡೆಲಿವರಿ ಮಾಡುವಾಗ ಅದನ್ನು “ಉದ್ಯೋಗ” ಎಂದು ಲೆಕ್ಕ ಹಾಕಬಹುದು, ಆದರೆ ₹4 ಲಕ್ಷ ಖರ್ಚಿನ ಶಿಕ್ಷಣದ ಮೌಲ್ಯ ಶೂನ್ಯ ಆದಾಗ ಆ ಯುವಕನ ಕಣ್ಣಲ್ಲಿ ಏನು ಹಾದು ಹೋಗುತ್ತದೆ ಎಂದು ಯಾವ ಅಂಕಿಯೂ ಹೇಳಲಾರದು.
ನೀಟ್ ಮತ್ತು ಜೆಇಇ ತರಬೇತಿ ಉದ್ಯಮ ₹70,000 ಕೋಟಿ ದಾಟಿದೆ. ಇದು ಭಾರತದ ಶಿಕ್ಷಣ ವ್ಯವಸ್ಥೆಯ ಯಶಸ್ಸಿನ ಸಂಕೇತ ಅಲ್ಲ ವೈಫಲ್ಯದ ಸಂಕೇತ. 20 ಲಕ್ಷ ಮಕ್ಕಳು ಡಾಕ್ಟರ್ ಆಗುವ ಕನಸಿನೊಂದಿಗೆ ನೀಟ್ ಬರೆಯುತ್ತಾರೆ ಸಿಗುವ ಸೀಟು 90,000. ಉಳಿದ 19 ಲಕ್ಷ ಮಕ್ಕಳ ಕನಸು ಆ ದಿನ ಮುರಿಯುತ್ತದೆ. ಕೋಟಾದ ಕೋಚಿಂಗ್ ಕೇಂದ್ರಗಳಿಂದ ಪ್ರತಿ ವರ್ಷ ಬರುವ ಆತ್ಮಹತ್ಯೆಯ ಸುದ್ದಿ ಅದು ಅಂಕಿ ಅಲ್ಲ, ಅದು ಒಂದೊಂದು ಮನೆಯ ನೋವು.
ಭಾರತದ 45% ಜನ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ, ಆದರೆ ಕೃಷಿ ದೇಶದ ಒಟ್ಟು ಆದಾಯಕ್ಕೆ ನೀಡುವ ಕೊಡುಗೆ 18% ಮಾತ್ರ. ಅರ್ಧ ದೇಶ 18% ಆದಾಯಕ್ಕಾಗಿ ಕಷ್ಟಪಡುತ್ತಿದ್ದರೆ, ಮಿಕ್ಕ ಅರ್ಧ ದೇಶ 82% ಹಂಚಿಕೊಳ್ಳುತ್ತಿದೆ. ನಗರದ ಮಗು ಆನ್ಲೈನ್ ತರಗತಿ, ಒಳ್ಳೆಯ ಶಿಕ್ಷಕ ಪಡೆದು ಬೆಳೆಯುತ್ತಿದ್ದರೆ, ಗ್ರಾಮೀಣ ಮಗು ಇನ್ನೂ ನೆಟ್ ಸಂಪರ್ಕಕ್ಕಾಗಿ ಕಾಯುತ್ತಿದೆ. ಈ ಅಸಮಾನತೆ ಸರಿಪಡಿಸದಿದ್ದರೆ ಭಾರತದ ಬೆಳವಣಿಗೆ ಇನ್ನೂ ಅರ್ಧ ದೇಶದ ಗಾಥೆ ಮಾತ್ರ ಆಗಿ ಉಳಿಯುತ್ತದೆ.
ಭಾರತ ಅಪಾರ ಶಕ್ತಿ ಹೊಂದಿರುವ ದೇಶ ನವೀಕರಿಸಬಹುದಾದ ಇಂಧನದಲ್ಲಿ ವಿಶ್ವದ ಮೂರನೇ ಸ್ಥಾನ, ಡಿಜಿಟಲ್ ವ್ಯವಸ್ಥೆಯಲ್ಲಿ ಜಾಗತಿಕ ಮಾದರಿ, ಲಕ್ಷ ಮೀರಿದ ನವೋದ್ಯಮಗಳು. ಇವು ಹೆಮ್ಮೆ ತರುವ ಸಾಧನೆಗಳು. ಆದರೆ ಈ ಶಕ್ತಿ ಕೇವಲ ಷೇರು ಮಾರುಕಟ್ಟೆಯ ಸೂಚ್ಯಂಕದಲ್ಲಿ ಕಾಣಿಸಿದರೆ ಸಾಲದು ಅದು ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಕಾಣಿಸಬೇಕು.
ನಿಜವಾದ ಅಭಿವೃದ್ಧಿ ಎಂದರೆ ಮಧ್ಯಮ ವರ್ಗ ತಿಂಗಳ ಕೊನೆಯಲ್ಲಿ ₹5,000 ಉಳಿಸಬಲ್ಲ ಭದ್ರತೆ, ರೈತ ಮಳೆ ಬಿದ್ದರೂ ಬೀಳದಿದ್ದರೂ ಮಕ್ಕಳಿಗೆ ಊಟ ಕೊಡಬಲ್ಲ ಖಾತ್ರಿ, ಯುವಕ ₹4 ಲಕ್ಷ ಖರ್ಚು ಮಾಡಿ ಓದಿದ ಮೇಲೆ ಅರ್ಥಪೂರ್ಣ ಕೆಲಸ ಸಿಗುವ ಭರವಸೆ. ಇದು ಅಂಕಿಯಲ್ಲಿ ಅಳೆಯಲಾಗದ, ಆದರೆ ಪ್ರತಿಯೊಬ್ಬ ಭಾರತೀಯ ಅನುಭವಿಸಬೇಕಾದ ಸ್ವಾತಂತ್ರ್ಯ.
ಆರ್ಥಿಕ ಬೆಳವಣಿಗೆ ಆಟೋ ಚಾಲಕನ ಮುಖದಲ್ಲಿ ನಿರಾಳತೆ ತಂದಾಗ, ಕೋಟಾದ ವಿದ್ಯಾರ್ಥಿ ಭಯವಿಲ್ಲದೆ ಪರೀಕ್ಷೆ ಕೂರಬಹುದು ಎಂದು ನಂಬಿದಾಗ, ಉತ್ತರ ಕರ್ನಾಟಕದ ರೈತ ನೆಮ್ಮದಿಯಿಂದ ಹೊಲದಲ್ಲಿ ಕೆಲಸ ಮಾಡಿದಾಗ ಅಂದು ಭಾರತ ನಿಜವಾಗಿ ಬೆಳೆದಿದೆ ಎನ್ನಬಹುದು. ಅಲ್ಲಿಯವರೆಗೆ, ಈ ಪ್ರಶ್ನೆ ಜೀವಂತ ಇರಲಿ ಬೆಳೆಯುತ್ತಿರುವ ಭಾರತದ ಬೆಳಕು ನಿಜಕ್ಕೂ ಎಲ್ಲರ ಮನೆಗೆ ತಲುಪುತ್ತಿದೆಯೇ?
ಪ್ರಯತ್ನ ನಿನ್ನ ದಾಗಲಿ, ಯಶಸ್ಸು ಬಯಸದಿದ್ದರೂ ಹಿಂಬಾಲಿಸಿ ಬರುತ್ತೆ. 👍