ಸವದತ್ತಿ : ಪ್ರಕೃತಿಯನ್ನು ರಕ್ಷಿಸಿದರೆ ಮಾತ್ರ ಮನುಕುಲದ ಉಳಿವಿಗೆ ಸಾಧ್ಯ. ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ ಸಿದ್ರಾಮ ಟಿ. ಅವರು ಹೇಳಿದರು.
ಇಲ್ಲಿನ ಗುರ್ಲಹೊಸೂರ ಗ್ರಾಮದ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ವಲಯ ಅರಣ್ಯಾಧಿಕಾರಿಗಳ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀ ದೇವದಾಸ ಎಚ್. ಮಾತನಾಡಿ, ಪ್ರಕೃತಿಯನ್ನು ಸಂರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಗಿಡಮರಗಳು ನಮಗೆ ಆಮ್ಲಜನಕ ಮತ್ತು ಮಳೆಯನ್ನು ನೀಡುತ್ತವೆ. ಪರಿಸರದ ಸಮತೋಲನ ತಪ್ಪಿದರೆ ಪ್ರವಾಹ, ಭೂಕಂಪ ಮತ್ತು ಬಿರುಗಾಳಿಯಂತಹ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಮುನವಳ್ಳಿ, ಎಮ್.ಎಸ್. ಹುಬ್ಬಳ್ಳಿ, ಎಸ್.ಎಸ್. ಕಾಳಪ್ಪನವರ, ಮಹಿಳಾ ಪ್ರತಿನಿಧಿ ಎಸ್.ವಾಯ್. ಶಿಬಾರಗಟ್ಟಿ, ಉಪ ವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ ಹಾಗೂ ಎಮ್.ಬಿ. ದ್ಯಾಮನಗೌಡರ, ಆರ್.ಎಮ್. ನಿಡವಣಿ, ವಾಯ್.ಎನ್. ಪಾಸ್ತೆ, ಎಮ್.ಎ. ಅಂಗಡಿ, ಆರ್.ಆರ್. ಚಿನಿವಾಲರ ಸೇರಿದಂತೆ ಹಲವರು ಉಪಸ್ಥಿತರಿದ್ದರು.